ಮುಡಾ ಅಕ್ರಮ ನಿವೇಶನ ಹಂಚಿಕೆ ಹಗರಣ; ಲೋಕಾಯುಕ್ತ ಬಿ ರಿಪೋರ್ಟ್ ವಿರುದ್ಧ ಕೋರ್ಟ್ ಮೊರೆ ಹೋದ ಇಡಿ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತಿತರರು ಪ್ರಮುಖ ಆರೋಪಿಗಳಾಗಿದ್ದ ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಬಿ ವರದಿಯನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ (ಇಡಿ) ವಿಚಾರಣಾ ನ್ಯಾಯಾಲಯಕ್ಕೆ ಪ್ರತಿಭಟನಾ ಅರ್ಜಿ (ಪ್ರೊಟೆಸ್ಟ್ ಪಿಟಿಷನ್) ಸಲ್ಲಿಸಿದೆ.
ಸಿಎಂ ಸಿದ್ದರಾಮಯ್ಯ, ಪತ್ನಿ ಬಿ ಎಂ ಪಾರ್ವತಿ, ಭಾವಮೈದುನ ಬಿ.ಎಂ. ಮಲ್ಲಿಕಾರ್ಜುನ ಸ್ವಾಮಿ ಹಾಗೂ ವಿವಾದಿತ ಜಮೀನಿನ ಮೂಲ ಮಾಲೀಕ ಜೆ. ದೇವರಾಜು ಅವರಿಗೆ ಕ್ಲೀನ್‌ಚಿಟ್ ನೀಡಿ 2025ರ ಫೆಬ್ರವರಿ 20ರಂದು ಲೋಕಾಯುಕ್ತ ಪೊಲೀಸರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಮುಕ್ತಾಯ ವರದಿ (ಬಿ ರಿಪೋರ್ಟ್) ಸಲ್ಲಿಸಿದ್ದಾರೆ. ಇದನ್ನು ವಿರೋಧಿಸಿ ಪ್ರತಿಭಟನಾ ಅರ್ಜಿ ಸಲ್ಲಿಸಿರುವ ಜಾರಿ ನಿರ್ದೇಶನಾಲಯ, ಮುಕ್ತಾಯ ವರದಿಗೆ ಸಂಬಂಧಿಸಿದಂತೆ ಆದೇಶ ಪ್ರಕಟಿಸುವುದಕ್ಕೂ ಮುನ್ನ ತನ್ನ ವಾದ ಆಲಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದೆ.
ಬಿ ರಿಪೋರ್ಟ್‌ಗೆ ಇಡಿ ಆಕ್ಷೇಪ:
ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಬಿ ವರದಿಯನ್ನು 2025ರ ಮಾರ್ಚ್ 26ರಂದು ಇಡಿ ಗೆ ನೀಡಲಾಗಿದೆ. ಅಕ್ರಮ ಕುರಿತ ಸಾಕ್ಷ್ಯವನ್ನು ಲೋಕಾಯುಕ್ತ ಪೊಲೀಸರಿಗೆ ಸಲ್ಲಿಸಲಾಗಿದೆ. ಬಿ.ಎಂ. ಮಲ್ಲಿಕಾರ್ಜುನ ಸ್ವಾಮಿ ಅವರು ವಿವಾದಿತ ಭೂಮಿ ಖರೀದಿಸುವುದಕ್ಕೂ ಮುನ್ನ ಎಲ್ ಆ್ಯಂಡ್ ಟಿ ಲಿಮಿಟೆಡ್ ಅಭಿವೃದ್ಧಿ ಕೆಲಸ ನಡೆಸಿರುವ ಸಂಬಂಧದ ದಾಖಲೆಗಳನ್ನು ಲೋಕಾಯುಕ್ತ ಪೊಲೀಸರಿಗೆ ಒದಗಿಸಲಾಗಿತ್ತು. 2001, 2002 ಹಾಗೂ 2003ರಲ್ಲಿ ರಸ್ತೆ ನಿರ್ಮಾಣ ಮತ್ತಿತರ ಚಟುವಟಿಕೆಗೆ ಸಂಬಂಧಿಸಿದಂತೆ ಸ್ಯಾಟಲೈಟ್ ಚಿತ್ರಗಳನ್ನು ಅಡಕಗೊಳಿಸಲಾಗಿತ್ತು. ಆದರೆ, ಅದ್ಯಾವುದನ್ನೂ ಲೋಕಾಯುಕ್ತ ಪೊಲೀಸರು ಪರಿಗಣಿಸಿಲ್ಲ ಎಂದು ಅರ್ಜಿಯಲ್ಲಿ ಇಡಿ ಆಕ್ಷೇಪಿಸಿದೆ.
ಮುಡಾ ಅಭಿವೃದ್ಧಿಪಡಿಸುತ್ತಿರುವ ನಡುವೆಯೇ ಕಂದಾಯ ಇಲಾಖೆ ಅಂದರೆ ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿ ಭೂಮಿ ವರ್ಗಾವಣೆ ನಡೆಸಿದ್ದಾರೆ. ಮಲ್ಲಿಕಾರ್ಜುನ ಸ್ವಾಮಿ ಕೋರಿಕೆಯ ಮೇರೆಗೆ ಇದನ್ನು ಮಾಡಲಾಗಿದೆ. ವಿವಾದಿತ ಭೂಮಿಯಲ್ಲಿ ಅಭಿವೃದ್ಧಿ ಕೆಲಸಗಳು ನಡೆದಿದ್ದರೂ ಅದನ್ನು ವರದಿಯಲ್ಲಿ ಉಲ್ಲೇಖಿಸಲಾಗಿಲ್ಲ. 2004ರಲ್ಲಿ ಮಲ್ಲಿಕಾರ್ಜುನ ಸ್ವಾಮಿ ವಿವಾದಿತ ಭೂಮಿ ಖರೀದಿಸಿದ್ದು, 2010ರಲ್ಲಿ ಅದನ್ನು ಪಾರ್ವತಿ ಅವರಿಗೆ ದಾನ ನೀಡಲಾಗಿದೆ. ಆದರೆ, 2014ರವರೆಗೆ ಅಂದರೆ ಒಟ್ಟಾರೆ ಒಂದು ದಶಕದ ಕಾಲ ಮುಡಾದಿಂದ ಯಾವುದೇ ಪರಿಹಾರ ಕೋರಿಲ್ಲ. ಇದನ್ನೂ ಲೋಕಾಯುಕ್ತ ಪೊಲೀಸರು ತಮ್ಮ ವರದಿಯಲ್ಲಿ ಪರಿಗಣಿಸಿಲ್ಲ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಮನವಿ ಏನು?
ಪ್ರಕರಣ ಸಂಬಂಧ ಸಲ್ಲಿಸಲಾಗಿದ್ದ ಖಾಸಗಿ ದೂರಿನಲ್ಲಿ ಮುಡಾದಲ್ಲಿ ಭಾರಿ ಹಗರಣ ನಡೆದಿದೆ ಎಂದು ವಿವರಿಸಲಾಗಿದ್ದು, ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ತನಿಖೆಗೆ ಅನುಮತಿಸುವಾಗ ಅದನ್ನೂ ಉಲ್ಲೇಖಿಸಿದ್ದಾರೆ. ಇದನ್ನು ಹೈಕೋರ್ಟ್ ಏಕಸದಸ್ಯ ಪೀಠ ಸಹ ಎತ್ತಿ ಹಿಡಿದಿದೆ. ಸಂಗ್ರಹಿಸಲಾಗಿರುವ ಸಾಕ್ಷಿಗಳಲ್ಲಿ ಮುಡಾ ನಿವೇಶನ ಹಂಚಿಕೆಯಲ್ಲಿ ಅಪಾರ ಪ್ರಮಾಣದ ಹಗರಣ ನಡೆದಿದ್ದು, ಇದರಲ್ಲಿ ನಗದು, ಸ್ಥಿರ-ಚರಾಸ್ತಿಯನ್ನು ನಿವೇಶನ ಹಂಚಿಕೆ ಮಾಡಲು ಮುಡಾ ಅಧಿಕಾರಿಗಳು ಪಡೆದಿದ್ದಾರೆ. ಇದನ್ನು ಲೋಕಾಯುಕ್ತ ಪೊಲೀಸರಿಗೆ ಒದಗಿಸಲಾಗಿದೆ. ಹೀಗಿದ್ದರೂ, ಯಾವುದೇ ಕ್ರಮವಾಗಿಲ್ಲ. ಆದ್ದರಿಂದ, ಪ್ರಕರಣದಲ್ಲಿ ಆರೋಪಿಗಳಿಗೆ ಕ್ಲೀನ್‌ಚಿಟ್ ನೀಡಿ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಅಂತಿಮ ವರದಿಯನ್ನು ಒಪ್ಪಬಾರದು ಹಾಗೂ ಸೂಕ್ತ ತನಿಖೆಗೆ ನಿರ್ದೇಶಿಸಬೇಕು ಎಂದು ಜಾರಿ ನಿರ್ದೇಶನಾಲಯ ಅರ್ಜಿಯಲ್ಲಿ ಕೋರಿದೆ.
ಪ್ರೊಟೆಸ್ಟ್ ಅರ್ಜಿ ಸಲ್ಲಿಸಲು ಹಕ್ಕಿದೆ:
ದೂರುದಾರರು ಅಥವಾ ಸಂತ್ರಸ್ತರು/ಬಾದಿತರು ಪ್ರತಿಭಟನಾ ಅರ್ಜಿ ಸಲ್ಲಿಸಬಹುದು ಎಂಬುದಕ್ಕೆ ಹಲವು ನ್ಯಾಯಾಂಗ ಆದೇಶಗಳಿವೆ. ಪಿಎಂಎಲ್ ಕಾಯ್ದೆ ಅಡಿ ಜಾರಿ ನಿರ್ದೇಶನಾಲಯ ಪ್ರಾಸಿಕ್ಯೂಷನ್ ಸಂಸ್ಥೆಯಾಗಿರುವುದರಿಂದ ಇಲ್ಲಿ ಅದನ್ನು ಬಾದಿತ ವ್ಯಕ್ತಿ ಎಂದು ಪರಿಗಣಿಸಬೇಕು. ಅಂತಿಮ ವರದಿಯ ಸಂಬಂಧ ಆದೇಶ ಹೊರಡಿಸುವ ಮುನ್ನ ತಮ್ಮ ಪ್ರತಿಭಟನೆ ಆಲಿಸಬೇಕು ಎಂದು ವಿಚಾರಣಾ ನ್ಯಾಯಾಲಯಕ್ಕೆ ಇಡಿ ಮನವಿ ಮಾಡಿದೆ.
What's Your Reaction?






